ಪಿಝಾರೋ, ಫ್ರಾನ್ಸೀಸ್ಕೋ
(ಸು. 1475-1541) ಪೆರುವನ್ನು ಗೆದ್ದ ಸ್ಪ್ಯಾನಿಷ್ ಸಾಹಸಿ. ಸ್ಪೇನಿನ ಎಸ್ಟ್ರಾಮದುರ ಪ್ರದೇಶದ ಟ್ರೂಹಿಯೋದಲ್ಲಿ ಸುಮಾರು 1475ರಲ್ಲಿ ಹುಟ್ಟಿದ. ಪೆರುವಿನ ಲೀಮದಲ್ಲಿ 1541ರ ಜೂನ್ 26 ರಂದು ಮರಣ ಹೊಂದಿದ. ಈತನ ತಂದೆ ಗೊಂಜಾಲೋ ಪಿಜಾರೋ. ಈತ ಸ್ಪ್ಯಾನಿಷ್ ಅಧಿಕಾರಿಯಾದ್ದ. ಫ್ರಾನ್ಸೀಸ್ಕೋ ಸಣ್ಣ ವಯಸ್ಸಿನಲ್ಲೇ ಸೈನಿಕನಾದ. 1509ರಲ್ಲಿ ಇವನು ಒಜೆಡ ಎಂಬುವನೊಂದಿಗೆ ಈಗಿನ ಕೊಲಂಬಿಯ ದೇಶದ ಕರಾವಳಿ ಪ್ರದೇಶವನ್ನು ಪರಿಶೋಧಿಸಿದ. ಇವನು 1519ರಲ್ಲಿ ಪನಾಮಾದಲ್ಲಿ ನೆಲೆಸಿದ. ಇನ್ಕ ಸಾಮ್ರಾಜ್ಯದ ಐಶ್ವರ್ಯ ಮತ್ತು ವೈಭವಗಳನ್ನು ಕೇಳಿ ದಕ್ಷಿಣ ಅಮೆರಿಕದ ಪóಶ್ಚಿಮ ತೀರವನ್ನು ಪರಿಶೋಧಿಸಲು ಯೋಜನೆ ಹಾಕಿಕೊಂಡ. 1524-25ರಲ್ಲಿ ಇವನು ಮೊದಲ ಸಲ ಪ್ರಯತ್ನ ನಡೆಸಿದ. ಇವನ ಪ್ರಯತ್ನ ಯಶಸ್ವಿಯಾಗಲಿಲ್ಲ. 1526ರಲ್ಲಿ ಬಹಳ ಕಷ್ಟಪಟ್ಟು ಗ್ವಾಯಾಕೀಲ್ ಕೊಲ್ಲಿಯ ಪ್ರದೇಶದ ಪರಿಶೋಧನೆ ನಡೆಸಿದ. ಚಿನ್ನವನ್ನೂ ಕೆಲವು ರೆಡ್ ಇಂಡಿಯನ್ನರನ್ನು ಸೆರೆ ಹಿಡಿದು ತಂದ. ತನ್ನ ದುಸ್ಸಾಹಸವನ್ನು ಮುಂದುವರಿಸುವ ಉದ್ದೇಶದಿಂದ ಫಿಜಾರೋ 1528ರಲ್ಲಿ ಸ್ಪೇನಿಗೆ ಹಿಂದಿರುಗಿ 5ನೆಯ ಚಾಲ್ರ್ಸ್‍ನ ನೆರವನ್ನು ಬೇಡಿದ. ಅವನು ಫಿಜಾóರೋಗೆ ಹಣವನ್ನು ಹೊಸ ನೆಲವನ್ನು ಜಯಿಸಿ ಅದರ ಆಡಳಿತ ನಡೆಸಲು ಆಧಿಕಾರವನ್ನು ನೀಡಿದ. 1530ರಲ್ಲಿ ಫಿಜಾóರೋ ತನ್ನ ಮೂವರು ಮಲಸೋದರರೊಂದಿಗೂ ಅನೇಕ ನಾವಿಕರೊಂದಿಗೂ ಪನಾಮಕ್ಕೆ ಬಂದ. 1531ರ ಜನವರಿಯಲ್ಲಿ ಪೆರುವಿನತ್ತ ಸಾಗಿದ. ಇನ್ಕದಲ್ಲಿ ಆಗ ಅಂತರ್ಯುದ್ಧ ನಡೆದಿತ್ತು. ಬಹು ಎಚ್ಚರಿಕೆಯಿಂದ ಫಿಜಾóರೋ ಜೂನ್ 1532 ರವರೆಗೆ ಪೆರುವಿನ ದಕ್ಷಿಣ ಭಾಗದತ್ತ ಸಾಗಿ, ಪೆರುವಿನ ಕರಾವಳಿ ಪ್ರದೇಶದ ಒಂದು ಕಡೆ ತನ್ನ ನೆಲೆಯನ್ನು ಸ್ಥಾಪಿಸಿದ. ಅದೇ ವರ್ಷ ಸೆಪ್ಟೆಂಬರ್‍ನಲ್ಲಿ ಇನ್ಕ ದೊರೆ ಆಟವಾಲ್ಪನನ್ನು ಭೇಟಿ ಮಾಡಲು ಒಳನಾಡಿಗೆ ಸಾಗಿದ. ಕಾಹಮಾರ್ಕ ಎಂಬಲ್ಲಿ ಅಟವಾಲ್ಪ ದೊಡ್ಡ ಸೇನೆಯೊಡನೆ ಫಿಜಾóರೋನನ್ನು ಎದುರಿಸಿದ. 1532ರಲ್ಲಿ ಪಿಜಾóರೋನ ಸೈನಿಕರು ಆ ನಗರವನ್ನು ಮುತ್ತಿ ಫಿರಂಗಿ ಹಾಗೂ ಅಶ್ವದಳವನ್ನು ಪ್ರಭಾವಪೂರ್ಣವಾಗಿ ಬಳಸಿ ಚಕ್ರವರ್ತಿಯ ಸೈನ್ಯ ದಿಗ್ಭ್ರಮೆಗೊಳ್ಳುವಂತೆ ಮಾಡಿದರು. ಅಟವಾಲ್ಪನನ್ನು ಮೋಸದಿಂದ ಸೆರೆ ಹಿಡಿಯಲಾಯಿತು. ಅವನು ಕ್ರೈಸ್ತ ಮತಕ್ಕೆ ಪರಿವರ್ತನೆ ಹೊಂದಲೊಪ್ಪಲಿಲ್ಲವೆಂದು ಫಿಜಾóರೋ ಅವನನ್ನು ಕತ್ತು ಹಿಸುಕಿ ಕೊಲ್ಲಿಸಿದ. ಆಂಡಿಯನ್ ಪ್ರಸ್ಥಭೂಮಿ ಪ್ರದೇಶದಲ್ಲಿದ್ದ ಇನ್ಕ ರಾಜಧಾನಿ ಕುಸ್ಕೋ ನಗರವನ್ನು ಫಿಜಾರೋ ವಶಪಡಿಸಿಕೊಂಡು ಅಗಾಧವಾದ ಸಂಪತ್ತನ್ನು ದೋಚಿದ. ಪ್ರತಿಭಟನೆ ಸಂಪೂರ್ಣವಾಗಿ ಅಡಗಿ ಹೋಯಿತು.

	ಅನಂತರದ ವರ್ಷಗಳಲ್ಲಿ ಫಿಜಾóರೋ ಪೆರು ಪ್ರದೇಶವನ್ನು ಆಕ್ರಮಿಸಿಕೊಂಡು ಅಲ್ಲಿ ಸ್ಪ್ಯಾನಿಷ್ ವಸಾಹತುವನ್ನು ಸ್ಥಾಪಿಸಲು ಯತ್ನಿಸಿದ. 1535ರಲ್ಲಿ ಹೊಸ ರಾಜಧಾನಿ ಲೀಮದ ಸ್ಥಾಪನೆಯಾಯಿತು. ಅಕ್ಕಪಕ್ಕದ ಪ್ರದೇಶಗಳು ದಾಳಿಗೆ ಒಳಗಾದುವು. ಈ ಲೂಟಿಯಲ್ಲಿ ಫಿಜಾóರೋಗೆ ಸಿಂಹಪಾಲು ದೊರೆಯಿತು. ಚಿಲಿಯನ್ನು ಗೆಲ್ಲಲು ಇವನು ಆಲ್ಮಾಗ್ರೋನನ್ನು ಕಳುಹಿಸಿಕೊಟ್ಟ. 1536ರಲ್ಲಿ ರೆಡ್ ಇಂಡಿಯನ್ನರೂ 1537ರಲ್ಲಿ ಚಿಲಿಯಿಂದ ಹಿಂದಿರುಗಿದ ಆಲ್ಮಾಗ್ರೋನೂ ಫಿಜಾóರೋಗೆ ಸ್ವಲ್ಪ ಕಾಲ ತೊಂದರೆ ಕೊಟ್ಟರು. ಫಿಜಾóರೋನ ಸೋದರರು 1538ರಲ್ಲಿ ರೆಡ್ ಇಂಡಿಯನ್ನರನ್ನು ಹತ್ತಿಕ್ಕಿ, ಆಲ್ಮಾಗ್ರೋನನ್ನು ಸೆರೆ ಹಿಡಿದು ಅವನನ್ನು ಕೊಂದು ಹಾಕಿದರು. ಅವನ ಅನುಯಾಯಿಗಳಿಗೆ ಕಿರುಕುಳ ಕೊಟ್ಟು, ಅವರಿಗೆ ನೀಡಿದ್ದ ಭೂಮಿಯನ್ನು ಕಿತ್ತುಕೊಳ್ಳಲಾಯಿತು. ಆಲ್ಮಾಗ್ರೋನ ಕೆಲವು ಅನುಯಾಯಿಗಳು 1541ರಲ್ಲಿ ಲೀಮದಲ್ಲಿ ಫಿಜಾóರೋನ ಮೇಲೆ ಹಠಾತ್ ದಾಳಿ ಮಾಡಿ ಇವನನ್ನು ಕೊಂದರು. 													 (ಎಸ್.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ